ಫೋನೊಗ್ರಾಫ್ - 
ಆವರ್ತಿಸುತ್ತಿರುವ ಯುಕ್ರ ಮೆದುಫಲಕದ ಮೇಲೆ ಧ್ವನಿತರಂಗಗಳನ್ನು ತರಂಗರೇಖೆಗಳಾಗಿ ಮುದ್ರಿಸುವ ಹಾಗೂ ಮುದ್ರತವಾದ ಫಲಕದಿಂದ ಧ್ವನಿತರಂಗಗಳನ್ನು ಉತ್ಪಾದಿಸುವ ಸಲಕರಣೆ. ವಾಡಿಕೆಯಲ್ಲಿ ಫೋನೊಗ್ರಾಫ್ ಪದ ಎರಡನೆಯ ಕ್ರಿಯೆ ಎಸಗುವ ಸಲಕರಣೆಯನ್ನು ಕುರಿತಂತೆ ಬಳಸಲಾಗುತ್ತಿದೆ. ಪ್ರಚಲಿತ ಪದ ಗ್ರಾಮಾಫೋನ್ ಎಂಬುದು ನಿಜಕ್ಕೂ ವ್ಯಾಪಾರನಾಮ. ಫೋನೊಗ್ರಾಫನ್ನು ನಿರ್ಮಿಸಿದವ ತಾಮಸ್ ಆಲ್ವ ಎಡಿಸನ್ (1847-1931). 1877ರಲ್ಲಿ ಈತ ತಯಾರಿಸಿದ ಧ್ವನಿಮುದ್ರಿಕೆಗಳಲ್ಲಿ ಮುದ್ರಣಕ್ಕೆ ತವರದತೆಳು ತಗಡು ಅಥವಾ ಮೇಣದ ಸಿಲಿಂಡರನ್ನು ಉಪಯೋಗಿಸಿ ಅದರ ಮೇಲೆ ಶಬ್ಧದ ಆಂದೋಳನಗಳನ್ನು ಕೆತ್ತಲು ಮೊನಚಾದ ತುದಿಯುಳ್ಳ ಲೇಖನಿಗಳನ್ನು ಉಪಯೋಗಿಸಿದ ವಿಪರ್ಯಯವಾಗಿ, ಈ ಕೆತ್ತನೆಗಳ ಮೂಲಕಹಾಯುವಲೇಖನಿಗಳಿಂದ ಮೂಲ ಧ್ವನಿಗಳನ್ನು ಉತ್ಪಾದಿಸಲು ಒಂದು ಪರೆಯನ್ನು (ಧ್ವನಿ ಸಂಪುಟ) ಉಪಯೋಗಿಸಿದ. ಇದೇ ಎಡಿಸನ್ ನಿರ್ಮಿಸಿದ ಮಾತನಾಡುವ ಫೋನೊಗ್ರಾಫ್. ಈ ತತ್ತ್ವವನ್ನು ಅವಲಂಬಿಸಿದ ಆಧುನಿಕ ಗ್ರಾಮಾಫೋನ್ ಸಲಕರಣೆ 1887ರಲ್ಲಿ ಸಿದ್ಧವಾಯಿತು. 

ಚಿತ್ರ-1

ಮೇಣದ ತಟ್ಟೆಯ ಮೇಲೆ ಮಾಡಲಾದ ಮುದ್ರಕೆಗಳು ಮೇಣ ಬಲು ಮೆತ್ತಗಿರುವುದರಿಂದ ಬೇಗ ಅಳಿಸಿಹೋಗಿ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಹೆಚ್ಚು ಪ್ರತಿಗಳನ್ನು ತೆಗೆಯಲು ಸಾಧ್ಯವಾಗದು. ಈ ಕೊರತೆ ನೀಗಲು ಗ್ರಾಫೈಟ್ ಪೌಡರನ್ನು ಆ ತಟ್ಟೆಯ ಮೇಲೆ ಹರಡಿ ಅದರ ಮೇಲೆ ತಾಮ್ರದ ತೆಳು ಮೇಲ್ಮೈಯನ್ನು ವಿದ್ಯುದ್ವಿಧಾನಗಳಿಂದ ಹೊದಿಸಬೇಕು. ಮೂಲ ಮೇಣದ ತಟ್ಟೆಯ ಮೇಲೆ ಮಾಡಲಾಗಿದ್ದ ಆಂದೋಳನಗಳ ತಗ್ಗುಗಳಿಗೆ ಅನುಗುಣವಾದ ಉಬ್ಬಿದ ಭಾಗಗಳು ಉಂಟಾಗುತ್ತವೆ. ಇದು ಋಣ ಫಲಕ (ನೆಗೆಟಿವ್ ರಿಕಾರ್ಡ್). ಇದಕ್ಕೆ ಮಾಸ್ಟರ್ ರಿಕಾರ್ಡ್ ಎಂದು ಹೆಸರು. ಇದನ್ನು ಒಂದು ಲೋಹದ ತಟ್ಟೆಗೆ ಜೋಡಿಸಿ ಇದರ ಮೇಲೆ ಚೆನ್ನಾಗಿ ಒತ್ತುವಂತೆ ಇಟ್ಟು ಕಾಸಿದ ಪ್ಲಾಸ್ಟಿಕ್ ತಟ್ಟೆಯ ಮೇಲೆ ಧನಫಲಕವನ್ನು (ಪಾಸಿಟಿವ್ ರಿಕಾರ್ಡ್) ತೆಗೆಯಲು ಸಾಧ್ಯವಾಗುತ್ತದೆ. ಪ್ಲಾಸ್ಟಿಕ್ ತಟ್ಟಿಯನ್ನು ಷೆಲ್ಲಾಕ್ ಮುಂತಾದ ದ್ರವ್ಯಗಳಿಂದ ತಯಾರಿಸಿರುವುದರಿಂದ ಅದು ಶಾಖದಿಂದ ಮೆತ್ತಗಾಗಿ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ. ಹೀಗೆ ಮೂಲ ಧ್ವನಿಮುದ್ರಕೆಗಳಿಗೆ ಅನುಗುಣವಾದ ಕೆತ್ತನೆಗಳನ್ನು ಒಳಗೊಂಡ ಹಲವಾರು ಪ್ರತಿಗಳುಳ್ಳ ತಟ್ಟೆಗಳನ್ನು ತಯಾರುಮಾಡುವ ಅವಕಾಶ ಉಂಟು. ಇದೇ ಈಗ ಬಳಕೆಯಲ್ಲಿರುವ ಗ್ರಾಮಾಫೋನುಗಳಲ್ಲಿ ಉಪಯೋಗಿಸಲ್ಪಡುವ ಧ್ವನಿ ಮುದ್ರಿಕೆಗಳ ರಚನೆಯ ತತ್ತ್ವ. 

	ಗ್ರಾಮಾಫೋನ್ ರಚನೆಯಲ್ಲಿ ಅಡಗಿರುವ ಮುಖ್ಯ ಅಂಗಗಳನ್ನು ಚಿತ್ರದಲ್ಲಿ ತೋರಿಸಿದೆ. ಅತಿ ಮುಖ್ಯವಾದ ಅಂಗವೆಂದರೆ ಸೌಂಡ್ ಬಾಕ್ಸ್ ಅಥವಾ ಧ್ವನಿ ಸಂಪುಟ. ಇದರಲ್ಲಿ ಅಲ್ಯೂಮಿನಿಯಮ್ ಮಿಶ್ರಲೋಹದ ಒಂದು ವಪೆ ಇದೆ. ಹಿಂದೆ ವಿವರಿಸಿದ ಪ್ರಕಾರ ತಯಾರಾದ ಧನ ಫಲಕಗಳು ಸುತ್ತುವಾಗ ಅವುಗಳಲ್ಲಿ ಕೆತ್ತಿರುವ ಸಣ್ಣ ಹಾದಿಗಳಲ್ಲಿ ಅಡ್ಡಡ್ಡವಾಗಿ ಸಂಚಾರ ಮಾಡುವ ಒಂದು ಸೂಜಿಯ ಮೂಲಕ ಆಂದೋಳನಗಳು ವಪೆಗೆ ಒಯ್ಯಲ್ಪಡುತ್ತವೆ. ವಪೆಯ ಆಂದೋಳನಗಳು ವರ್ಧಿಸಲ್ಪಟ್ಟು ವಾಯುವಿನ ಮೂಲಕ ಹಾಯ್ದು ಅದರ ಸ್ಟೈಡರ್ ಭಾಗವನ್ನು ಅಲುಗಾಡಿಸುತ್ತವೆ. ಚಿತ್ರದಲ್ಲಿ ತೋರಿಸಿರುವಂತೆ ಈ ವಪೆಯನ್ನು ಎರಡು ಕಡೆಗಳಲ್ಲಿಯೂ ರಬ್ಬರ್ ಒತ್ತುಗಳ ನಡುವೆ ಅಳವಡಿಸಿದೆ. ಹೊರಗಡೆಯ ಲೋಹದ ಆವರಣಕ್ಕೂ ವಪೆಗೂ ನಡುವೆ ಒತ್ತುವಿಕೆಯಿಂದ ಉಂಟಾಗುವ ಶಬ್ದವನ್ನು ನಿರ್ಮೂಲನ ಮಾಡಲು ಈ ಏರ್ಪಾಡು. ವಪೆಯಲ್ಲಿ ತಲೆದೋರುವ ಆಂದೋಳನಗಳ ದೆಸೆಯಿಂದ ವಾಯುವಿನಲ್ಲಿ ಉಂಟಾಗುವ ಸಂಕೋಚನ ವ್ಯಾಕೋಚನಗಳು ಮುದ್ರಿಕೆಯಲ್ಲಿ ಮುದ್ರಿತವಾಗಿರುವ ಧ್ವನಿಯನ್ನೇ ಹೋಲುವ ಶಬ್ದವನ್ನು ಉತ್ಪಾದಿಸುತ್ತವೆ. ಇದನ್ನು ಕೊಂಬಿನ ಮೂಲಕ ವರ್ಧಿಸಿ ಮೂಲಧ್ವನಿಯ ಸತ್ಯಪ್ರತಿಯನ್ನು ಪಡೆಯಲಾಗುತ್ತದೆ. 
(ಕೆ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ